Friday, October 05, 2012

ಹಿಮ ಮತ್ತು ಗುರು ಮಾವ

ಒಂದೆರಡು ವರ್ಷಗಳ ಹಿಂದಿನ ಮಾತು. ನಾದಿನಿ ಮಗಳು ಹಿಮ 3-4 ವರ್ಷದ ಹುಡುಗಿ. ಆಗ ತಾನೇ ತಾತನಿಂದ ವಾರಗಳ ಹೆಸರು, ತಿಂಗಳುಗಳ ಹೆಸರು ಕಲಿತಿದ್ದಳು. ಯಾವ ವಾರದ ನಂತರ ಯಾವ ವಾರ ಬರುತ್ತದೆಂಬುದು ಅವಳ ನೆಚ್ಚಿನ ಆಟವಾಗಿತ್ತು.

ನಮ್ಮ ಸೋದರತ್ತೆ ಮಗ ಗುರು ಮೂರ್ತಿ ಊರಿನಿಂದ ಬಂದಿದ್ದರು. ಬಹಳ ತಿಂಗಳುಗಳ ನಂತರ ಅವರನ್ನು ನೋಡುತ್ತಿದ್ದರಿಂದ ಹಿಮಳಿಗೆ ಪರಿಚಯ ಮಾಡಿಕೊಟ್ಟೆವು. 

"ಹಿಮ ನೋಡು, ಇವರು ಗುರು-ಮಾವ; ಮಾವನಿಗೆ ನಮಸ್ತೆ ಹೇಳು" 

ಗುರು ಮಾವನಿಗೆ ನಮಸ್ತೆ ಹೇಳಿದ ಹಿಮ ತಟ್ಟನೆ ನಮ್ಮೆದುರು ತಿರುಗಿ, ಹೀಗೆನ್ನ ಬೇಕೇ? 
"ಇವರು ಗುರು ಮಾವ, ಓಕೆ! ಶುಕ್ರ-ಮಾವ ಯಾರು?"

ನಮಗೆಲ್ಲ ಎಲ್ಲಿಲ್ಲದ ನಗು! ಕಕ್ಕಾಬಿಕ್ಕಿಯಾಗಿದ್ದ ಗುರು ಮೂರ್ತಿಗೆ ಇವಳ logic ಅರ್ಥ ಮಾಡಿಸುವುದು ಕಷ್ಟವೇ ಆಯಿತು! 
Wednesday, February 23, 2011

ದ್ವೀಪವ ಬಯಸಿ

M.R. ದತ್ತಾತ್ರಿ ಅವರ ಹೊಸ ಕಾದಂಬರಿ 'ದ್ವೀಪವ ಬಯಸಿ' ಸೊಗಸಾಗಿ ಮೂಡಿ ಬಂದಿದೆ. ಹೊಸ ಕಾದಂಬರಿ ಪ್ರಕಟವಾದ ಕೂಡಲೇ ಕೊಂಡು, ಓದಿ ಮುಗಿಸಿದ್ದಕ್ಕೆ ನನಗೇ ಖುಷಿಯಾಯಿತು. ಬೆಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಸುಧೇಂದ್ರರೆ ಖುದ್ದಾಗಿ ಛಂದ ಪುಸ್ತಕದ ವತಿಯಿಂದ ಶಿಫಾರಸು ಮಾಡಿದ ಪುಸ್ತಕವಿದು. ಅದರಂತೆಯೇ ಪುಸ್ತಕವು ಬಹಳ ಚೆನ್ನಾಗಿದೆ, ಭಾಷೆಯ ಶೈಲಿ ಉತ್ತಮವಾಗಿದೆ, ಕಥೆ ಬೇಗ ಬೇಗನೆ ಓಡಿಸಿಕೊಂಡು ಹೋಗುವಂತಿದೆ.
ಕಥೆಯ ವಿಷಯ ಸಮಕಾಲೀನವಾಗಿರುವುದು, ಅಲ್ಲಿ ಬರುವ ಪ್ರತಿಯೊಂದು ಪಾತ್ರ ಹಾಗು ಪ್ರತಿಯೊಂದು ಸನ್ನಿವೇಶವು ಓದುಗರಿಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ ಹಾಗು ಅದರೊಂದಿಗೆ ಸುಲಭವಾಗಿ relate ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲಿ ಚಿತ್ರಿಸಿರುವ ಎಲ್ಲ ಜಾಗತಿಕ ವಿಷಯಗಳು ನಾವು ಇತ್ತೀಚಿನ ವರ್ಷಗಳಲ್ಲಿ ಅನುಭವಿಸಿದ್ದ ಅಥವಾ ಕೇಳಿದ್ದ, ನಮ್ಮ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರಿದ್ದ ಘಟನೆಗಳು. ಕಾದಂಬರಿಯ ನಾಯಕ ನಾಯಕಿಯರು, ನಾವೇ, ಅಥವಾ ನಮಗೆ ಬಹಳ ಹತ್ತಿರದಲ್ಲಿರುವವರು ಎಂಬ ಭಾವನೆ ಹುಟ್ಟುತ್ತದೆ.
ಇಲ್ಲಿನ ದೂರದ ಊರೊಂದರಲ್ಲಿನ ಜೀವನ, ಬೆಂಗಳೂರಿನ IT ಕಂಪನಿಗಳು, ವಿದೇಶ ಯಾತ್ರೆಗಳು, ಅಮೆರಿಕಾದ ಜೀವನ, ಲೇ-ಆಫ್ ಗಳು, ವೀಸಾ ಸಮಸ್ಯೆ, ಮಾನಸಿಕ ಯಾತನೆಗಳು, ಕೌನ್ಸೆಲ್ಲಿಂಗ್, ಎಲ್ಲವೂ ಬಹಳ ಪ್ರಸ್ತುತವಾಗಿವೆ.
ಒಂದು ಹೊಸ, ಉತ್ತಮವಾದ ಪುಸ್ತಕವನ್ನು ಓದಿದ್ದು ಬಹಳ ಸಂತೋಷವಾಯಿತು.

ಉತ್ತಮ ಪುಸ್ತಕ ನೀಡಿರುವ ಲೇಖಕರಿಗೆ ಧನ್ಯವಾದಗಳು.

Tuesday, August 31, 2010

ತಾಯಿಯವರಿಗೆ ಮಾಸ್ತಿ ಕಾದಂಬರಿ ಪುರಸ್ಕಾರ!

ನಮ್ಮ ತಾಯಿ ಶ್ರೀಮತಿ ಸರಸ್ವತಿ ನಟರಾಜ್ ಅವರ 'ಮನೆ' ಎಂಬ ಕಾದಂಬರಿಗೆ ಈ ಸಾಲಿನ ಮಾಸ್ತಿ ಕಾದಂಬರಿ ಪುರಸ್ಕಾರ ದೊರೆತಿದೆ.

Wednesday, August 04, 2010

ಉಪಾಯ!

ಪೋಲಿಸ್ ನವರಿಂದ ತಪ್ಪಿಸಿಕೊಳ್ಳಲು ಮಾಡಿರುವ ಉಪಾಯ ನೋಡಿ.... ಹರ್ಯಾಣ ಮತ್ತು ತಮಿಳುನಾಡಿನ ಗಾಡಿಗಳ ಮೇಲೆ ಅಚ್ಚ ಕನ್ನಡದಲ್ಲಿ ಬರೆದ Number Plateಗಳು!!!

Wednesday, July 07, 2010

ಝವಾದಿ


ಈ ಕಾದಂಬರಿಯನ್ನು ನಾನು ೨ ವಾರಗಳಿಗೂ ಕಡಿಮೆ ಸಮಯದಲ್ಲಿ ಓದಿ ಮುಗಿಸಿದೆ. ನನ್ನ ಕನ್ನಡ ಓದುವ ಸಾಧಾರಣ ವೇಗಕ್ಕೆ ೫೫೦ ಪುಟಗಳನ್ನು ಇಷ್ಟು ಬೇಗ ಮುಗಿಸಿದ್ದು ನನಗೇ ಆಶ್ಚರ್ಯವಾಯಿತು.
ಲೇಖಕಿ ಶ್ರಿಮತಿ ಸುನಂದ ಬೆಳಗಾಂಕರ್ ಅವರು ಒಂದು ಸಾಮಾನ್ಯ ಸಾಂಸಾರಿಕ ಕಥೆಯನ್ನು ಸುಂದರವಾದ ಕಾದಂಬರಿಯಾಗಿ ಹೆಣೆದಿದ್ದಾರೆ.
ಮುಖ್ಯ ಪಾತ್ರಧಾರಿಯಾದ ಶಂಕರ ರಾಯರು, ಮೂರನೆ ವ್ಯಕ್ತಿಯ ಚಾಡಿ ಕೇಳಿ ತಮ್ಮ ಪತ್ನಿ, ಮಕ್ಕಳನ್ನು ತಿರಸ್ಕರಿಸಿರುತ್ತಾರೆ. ಎಷ್ಟೋ ವರ್ಷಗಳ ನಂತರ, ಆಫ್ರಿಕಾದ ಗೊರೊಂಗೊರೊ ಕ್ರೇಟರಿನ ಒಂದು ರಾಜ ಸಿಂಹ ಕುಟುಂಬದ ಪರಿಸ್ಥಿತಿಯು ಇವರ ಕುಟುಂಬದಂತೆಯೇ ಆಗಿದ್ದು, ನಂತರ ಸಿಂಹ ರಾಜ ತನ್ನ ತಪ್ಪನ್ನು ಅರಿತು, ಸಿಂಹಿಣಿಯನ್ನು ಸೇರುತ್ತದೆ. ಆ ಕುಟುಂಬಕ್ಕೂ, ತಮ್ಮ ಸಂಸಾರಕ್ಕೂ ಇರುವ ಹೋಲಿಕೆಯನ್ನು ಕಂಡು,ಅಲ್ಲಿನ ಗೈಡ್ ನ ಮಾತುಗಳಿಂದ, ತಾವು ಮಾಡಿದ ತಪ್ಪಿನ ಅರಿವಾಗಿ, ಪ್ರಾಯಶ್ಚಿತ್ತಾರ್ಥವಾಗಿ, ಮುಂಬೈಗೆ ಹಿಂದಿರುಗಿ, ಸಂಸಾರದೊಂದಿಗೆ ಒಂದಾಗುತ್ತಾರೆ. ಝಾವಾದಿ ಎಂದರೆ ಸ್ವಹೀಲಿ ಭಾಷೆಯಲ್ಲಿ "(ದೇವರ)ಕಾಣಿಕೆ" ಎಂದರ್ಥ. ವಿಷೇಶವಾದ ಕಥಾ ವಸ್ತು ಇಲ್ಲವಾದರು, ಕಥೆಯನ್ನು ಹೆಣೆದಿರುವ ರೀತಿ ಸೊಗಸಾಗಿದೆ.
- ಆಫ್ರಿಕಾದ ಗೊರೊಂಗೊರೊ ಕ್ರೇಟರಿನ ವರ್ಣನೆ ಸೊಗಸಾಗಿದೆ. ಓದುತ್ತಿರುವಂತೆ, ಅಲ್ಲಿನ ಪ್ರಾಣಿಗಳು ನಮ್ಮ ಕಣ್ಣೆದುರಿಗೇ ಸುಳಿದಾಡುತಿರುವಂತೆನಿಸುತ್ತದೆ.
- ಸಂಭಾಷಣೆಗಳು ಧಾರವಾಡ ಶೈಲಿಯ ಕನ್ನಡದಲ್ಲಿದ್ದು, ಚೇಷ್ಟೆಯ ಮಾತುಗಳು, ಅಂತಃಕರಣದ ಮಾತುಗಳು ಬಹಳ ಸಹಜವಾಗಿದೆ
- ಮುಖ್ಯ ಪಾತ್ರಗಳ ಮನಃಸ್ಥಿತಿಯ ವರ್ಣನೆ ನಮ್ಮೊಳಗೊಬ್ಬರ ಕಥೆಯನ್ನು ಓದುತ್ತಿರುವಂತೆನಿಸುತ್ತದೆ.
ಇದನ್ನು ಅಮ್ಮ ಸುಮಾರು ಹತ್ತು ವರ್ಷಗಳ ಹಿಂದೆ ಓದಿದ್ದು, ಲಿಬ್ರರಿಯಲ್ಲಿ ಇತ್ತೀಚೆಗೆ ಕಂಡು, ತಂದಿದ್ದರು. ನಮಗೆ ಸಿಕ್ಕ ಪ್ರತಿ ೧೯೯೪ ನಲ್ಲಿ ಮುದ್ರಣಗೊಂಡಿದ್ದು. ಮುದ್ರಣದಲ್ಲಿ ಹಲವು ತಪ್ಪುಗಳಿದ್ದುವು.
- ಸುಮಾರು ಸಂಭಾಷಣೆಗಳು ಇಂಗ್ಲಿಷಿನಲ್ಲಿದ್ದು, ಇಂಗ್ಲಿಷನ್ನು ಕನ್ನಡೀಕರಿಸಿ ಬರೆದದ್ದು ಓದಲು ಹಲವೆಡೆ ತಮಾಷೆಯಾಗಿತ್ತು.
- ಸಂಭಾಷಣೆಗಳನ್ನು ಕಡಿಮೆ ಮಾಡಿ, ಪುಸ್ತಕದ ಗಾತ್ರ ಸ್ವಲ್ಪ ಕಡಿಮೆ ಮಾಡಬಹುದಿತ್ತು. ಆದರು, ತುಂಬ ಬೋರ್ ಆಗುವಂತೇನು ಇಲ್ಲ.
ಒಮ್ಮೆ ಓದಲು, ಒಳ್ಳೆಯ ಲಘುವಾದ ಕಾದಂಬರಿ.

Friday, December 11, 2009

ಖಾಂಡೇಕರರ ಯಯಾತಿ

ಖಾಂಡೇಕರರ ಯಯಾತಿಯನ್ನು ಓದಿ ಮುಗಿಸಿ ಒಂದೂವರೆ ತಿಂಗಳೇ ಕಳೆದರೂ ಅದರ ಬಗ್ಗೆ ೨ ಸಾಲೂ ಬರೆಯಲು ಸಾಧ್ಯವಾಗಿಲ್ಲ. ಕೆಲಸ ಹೆಚ್ಚಾಗಿರುವುದು ಒಂದು ಕಾರಣವಾದರೆ, ಬರೆಯಬೇಕೆನ್ದಿರುವುದನ್ನು ಬರೆಯಲು ತಕ್ಕ ಪದಗಳು ದೊರೆಯದಿರುವುದೇ ಮತ್ತೊಂದು ಪ್ರಮುಖ ಕಾರಣ.

ಯಯಾತಿ ಒಂದು Classic novel. ಅದಕ್ಕೆ ಜ್ಞಾನಪೀಟ (i couldn't type the exact spelling :( ) ಪ್ರಶಸ್ತಿ ದೊರೆತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಕಾರ್ನಾಡರ ಯಯಾತಿಗೂ, ಖಾಂಡೇಕರರ ಯಯಾತಿಗೂ ಬಹಳ ವ್ಯತ್ಯಾಸವನ್ನು ಕಂಡೆ. ಹೌದು ಒಂದು ದೊಡ್ಡ ಕಾದಂಬರಿಯಾದರೆ ಮತ್ತೊಂದು ನಾಟಕ. ಆ ನಾಟಕವನ್ನು ನಾನು ಪಿ.ಯು.ಸಿ ಯ ನಂತರ ಮತ್ತೆ ಓದಿಲ್ಲವಾದರೂ, ಈ ಕಾದಂಬರಿಯಲ್ಲಿ ಬಹಳ ಸೂಕ್ಷ್ಮತೆಗಳನ್ನು ಸೆರೆ ಹಿಡಿದಿದ್ದಾರೆ ಎಂದು ಹೇಳಬಲ್ಲೆ.

ಯಯಾತಿ, ದೇವಯಾನಿ, ಶರ್ಮಿಷ್ಠೆ, ಹಾಗು ಕಚ - ಇವು ಪ್ರಮುಖ ಪಾತ್ರಗಳಾಗಿದ್ದು, ಈ ನಾಲ್ಕೂ ಪಾತ್ರಗಳ ಮನಃ ಸ್ಥಿತಿ ಯನ್ನು ಬಹಳ ಸುಂದರವಾಗಿ ವಿವರಿಸಿದ್ದಾರೆ. ಯಯಾತಿಯ ಮನಸ್ಸಿನ ಗೊಂದಲಗಳು, ಅವನ ಅಸಂತೃಪ್ತ ಮನಸ್ಸು, ಪಟ್ಟದರಸಿಯಾಗುವುದೊಂದೇ ಜೀವನದ ಸಂತೋಷ ಎಂದು ಭಾವಿಸಿದ್ದ ದೇವಯಾನಿ, ಆಕೆಯ ಹಟ, ತಾನು ಶುಕ್ರಾಚಾರ್ಯರ ಮಗಳೆಂಬ ಅಹಂಕಾರ, ಶರ್ಮಿಷ್ಠೆಯ ತ್ಯಾಗ, ಅಸಹಾಯಕತೆ.. ಹೀಗೆ ಪ್ರತಿಯೊಂದನ್ನೂ ಮನ ಮುಟ್ಟುವ ರೀತಿಯಲ್ಲಿ ಬರೆದಿದ್ದಾರೆ.

ಪ್ರತಿಯೊಂದು ಪಾತ್ರವನ್ನು ಓದುವಾಗಲೂ, ಓದುಗರು ತಾವೇ ಆ ಪಾತ್ರವನ್ನು ಹೊಕ್ಕು, ಅನುಭವಿಸುವ ಹಾಗಿದೆ!ನಾನಂತೂ, ಇದನ್ನು ಓದುವಾಗ ಅದೆಷ್ಟೋ ಬಾರಿ, ಸಂಪೂರ್ಣವಾಗಿ ಆ ಸನ್ನಿವೇಶಗಳಲ್ಲಿ ಮುಳುಗಿ ಹೋಗಿ, ನನಗೇ ತಿಳಿಯದೆ ಕಣ್ಣೀರು ಸುರಿಸುವಂತಾಗಿತ್ತು! ನಾನು ಅಷ್ಟೊಂದು ತಲ್ಲೀನಲಾಗಿರುವುದನ್ನು ಕಂಡು ದೀಪಕ್ ಕೆಲವೊಮ್ಮೆ ನಾನು ಓದುವುದೇ ಸಾಕು ಎಂದೂ ಯೆಚ್ಚರಿಸಿದ್ದುಂಟು !

ನಿಮಗೂ ಯಯಾತಿ ಇಷ್ಟವಾಗುತ್ತದೆ ಎಂದು ಖಂಡಿತವಾಗಿ ಹೇಳಬಲ್ಲೆ. ಅವಕಾಶ ಸಿಕ್ಕಾಗ ಖಂಡಿತ ಓದಿ.

Pls excuse the typos in this post, which i could identify, but tried hard in vain to fix them, thanks to this kannada editor :(

Monday, August 31, 2009

ಪೊಳ್ಳು ದೃಷ್ಟಿ ಬೊಂಬೆಯೊಳಗೊಂದು ಪಕ್ಷಿ ಸಂಸಾರ!

ಒಂದು ಮುಂಜಾನೆ ತಾರಸಿಯ ಮೇಲೆ ಹೋದ ನಮಗೆ, ಅಲ್ಲಿ ಕಂಡಿದ್ದು ಕಂದು-ಕಪ್ಪು ಬಣ್ಣದ ಪುಟ್ಟ ಹಕ್ಕಿ ಜೋಡಿ. ನಮ್ಮನ್ನು ಕಂಡ ಅವು ಭಯಭೀತಗೊಂಡು, ಸ್ವಲ್ಪ ದೂರದ ತಂತಿಯೊಂದರ ಮೇಲೆ ಹಾರಿ ಕೂತವು.

ಸಂಶಯದಿಂದ ಅಲ್ಲೆಲ್ಲ ಪರಿಶೀಲಿಸುತ್ತ ಒಂದು ಮೂಲೆಯಲ್ಲಿದ್ದ ಪೊಳ್ಳು, ಒಡಕಲು ದೃಷ್ಟಿ ಬೊಂಬೆಯೊಳಗೆ ಇಣುಕಿದೆವು. ಅದರೋಳಗಿತ್ತು ಒಣ ಹುಲ್ಲಿನಿಂದ ನಿರ್ಮಿಸಲ್ಪಟ್ಟ ಸುಂದರ ಗೂಡೊಂದು. ಗೂಡಿನೊಳಗೆ ಬಿಳಿ-ಕಂದು ಬಣ್ಣದ ಮೂರು ಮೊಟ್ಟೆಗಳು!


ಆ ಗೂಡನ್ನು ಅಷ್ಟು ಹತ್ತಿರದಿಂದ ನೋಡುವುದು ರೋಮಾಂಚಕಾರಿಯಾಗಿದ್ದರೂ, ಆ ಪುಟ್ಟ ಹಕ್ಕಿಗಳ ಭೀಭತ್ಸ್ಯ ಕೂಗಿನಿಂದ ಅಲ್ಲಿಂದ ದೂರ ಸರಿದು, ನಿಃಶಬ್ಧವಾಗಿ ಕುಳಿತೆವು. ಎರಡು ನಿಮಿಷಗಳ ನಂತರ, ಕಂದು ಬಣ್ಣದ ಹೆಣ್ಣು ಹಕ್ಕಿ ಹಾರಿ ಬಂದು, ಸುತ್ತಲೂ ಪರಿಶೀಲಿಸಿ, ಅಪಾಯವೇನೂ ಇಲ್ಲವೆಂದು ಖಾತ್ರಿ ಪಡಿಸಿಕೊಂಡು, ಮೊಟ್ಟೆಗಳಿಗೆ ಕಾವು ನೀಡಲು ಆ ಪುಟ್ಟ ಗೂಡನ್ನು ಹೊಕ್ಕಿತು. ಕಪ್ಪು ಬಣ್ಣದ ಗಂಡು ಹಕ್ಕಿ ಅಲ್ಲೇ ತಂತಿಯ ಮೇಲೆ ಕಾವಲು ಕಾಯುತ್ತಿರುವಂತೆ ಕುಳಿತಿತ್ತು. ತನ್ನ ಗೂಡಿನ ಬಳಿಯಲ್ಲಿ ಏನಾದರೂ ಆಪತ್ತನ್ನು ಶಂಕಿಸಿದರೆ, ಚಿಟಾರನೆ ಚೀರಿ, ತನ್ನ ಸಂಗಾತಿಗೆ ಸೂಚನೆ ನೀಡುತ್ತಿತ್ತು.


ಹೀಗೆಯೇ ಒಂದು ವಾರ ನಡೆಯಿತು. ಆ ಹೆಣ್ಣು ಹಕ್ಕಿ ಗೂಡಿನಿಂದ ಹೊರಗೆ ಹಾರುವುದನ್ನೇ ಕಾಯ್ದುಕೊಂಡಿದ್ದು, ನಾವು ಇಣುಕಿ ನೋಡಿ ಸಂತಸ ಪಡುತ್ತಿದ್ದೆವು, ಕೆಲವೊಮ್ಮೆ ಫೋಟೋ ತೆಗೆದುಕೊಳ್ಳುತ್ತಿದ್ದೆವು.
ಸುಮಾರು ಒಂದು ವಾರದ ನಂತರ ಮೊಟ್ಟೆಗಳು ಒಡೆದು, ಕಪ್ಪು ಮಾಂಸದ ಮುದ್ದೆಗಳಂತಿದ್ದ ಸಣ್ಣ ಮರಿಗಳು ಹೊರಬಂದಿದ್ದುವು! ರೂಪದಲ್ಲಿ ಹಕ್ಕಿಗಳನ್ನು ಇಷ್ಟೂ ಹೋಲದಿದ್ದ ಅವುಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದುದು ಹಳದಿ ಬಣ್ಣದ ಕೊಕ್ಕುಗಳು ಮಾತ್ರ.

ಇದುವರೆಗೂ ಕಾವಲು ಕಾಯುತ್ತಿದ್ದ ಗಂಡು ಹಕ್ಕಿ ಈಗ ತನ್ನ ಕೊಕ್ಕಿನಲ್ಲಿ ಹುಳು ಹುಪ್ಪಟೆಗಳನ್ನು ಹಿಡಿದು ತಂದು ತನ್ನ ಪುಟ್ಟ ಕಂದಮ್ಮಗಳಿಗೆ ಉಣಿಸಲಾರಂಭಿಸಿತು. ಹೆಣ್ಣು ಪಕ್ಷಿ ಈಗ ಗೂಡನ್ನು ಕಾವಲು ಕಾಯುವ ಜವಾಬ್ದಾರಿಯನ್ನು ವಹಿಸಿಕೊಂಡಿತು.

ಹೊಟ್ಟೆ-ಬಾಕ ಮರಿಗಳು ಸದಾ ಬಾಯಿ ತೆರೆದುಕೊಂಡು ಅಪ್ಪ ತಂದು ಕೊಡುತ್ತಿದ್ದ ಆಹಾರಕ್ಕಾಗಿಯೇ ಕಾಯುತ್ತಿರುತ್ತಿದ್ದವು. ನಾಲ್ಕೈದು ದಿನ ಹಾಗೆಯೇ ಮಾಂಸದ ಮುದ್ದೆಗಳಂತಿದ್ದ ಮರಿಗಳು, ಕ್ರಮೇಣ ಸಣ್ಣ ಸಣ್ಣ ಗರಿಗಳು ಬೆಳೆದು, ಹಕ್ಕಿ-ರೂಪ ಪಡೆದುಕೊಂಡು ಲಕ್ಷಣವಾಗಿ ಕಾಣತೊಡಗಿದವು, ಹಾರಲು ಸಿದ್ಧವಾಗುತ್ತಿದ್ದವು.


ಕೊನೆಗೊಂದು ದಿನ ಸಂಜೆ ಹಕ್ಕಿಮರಿಗಳನ್ನು ನೋಡಲು ಹೋದಾಗ ಗೂಡು ಬರಿದಾಗಿತ್ತು. ಸುತ್ತ ಮುತ್ತ ಪೊದೆಗಳ ನಡುವೆ, ತಂತಿಯ ಮೇಲೆ ಅಪ್ಪ-ಅಮ್ಮ ಹಕ್ಕಿಗಳಲ್ಲದೆ, ಮೂರು ಸಣ್ಣ ಮರಿಗಳೂ ಸ್ವಲ್ಪ ಸ್ವಲ್ಪವಾಗಿ ಹಾರಾಡುತ್ತಿದ್ದವು. ಆಗತಾನೇ ಗೂಡಿನಿಂದಾಚೆ ಬಂದು, ಹಾರಲು ಕಲಿತ ಮರಿಗಳು ವಿಶಾಲವಾದ ಆಗಸದಲ್ಲಿ ಸ್ವಚ್ಛಂದವಾಗಿ ಹಾರುತ್ತಿದ್ದ ನೋಟ ರಮಣೀಯವಾಗಿತ್ತು.