Wednesday, February 23, 2011

ದ್ವೀಪವ ಬಯಸಿ

M.R. ದತ್ತಾತ್ರಿ ಅವರ ಹೊಸ ಕಾದಂಬರಿ 'ದ್ವೀಪವ ಬಯಸಿ' ಸೊಗಸಾಗಿ ಮೂಡಿ ಬಂದಿದೆ. ಹೊಸ ಕಾದಂಬರಿ ಪ್ರಕಟವಾದ ಕೂಡಲೇ ಕೊಂಡು, ಓದಿ ಮುಗಿಸಿದ್ದಕ್ಕೆ ನನಗೇ ಖುಷಿಯಾಯಿತು. ಬೆಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಸುಧೇಂದ್ರರೆ ಖುದ್ದಾಗಿ ಛಂದ ಪುಸ್ತಕದ ವತಿಯಿಂದ ಶಿಫಾರಸು ಮಾಡಿದ ಪುಸ್ತಕವಿದು. ಅದರಂತೆಯೇ ಪುಸ್ತಕವು ಬಹಳ ಚೆನ್ನಾಗಿದೆ, ಭಾಷೆಯ ಶೈಲಿ ಉತ್ತಮವಾಗಿದೆ, ಕಥೆ ಬೇಗ ಬೇಗನೆ ಓಡಿಸಿಕೊಂಡು ಹೋಗುವಂತಿದೆ.
ಕಥೆಯ ವಿಷಯ ಸಮಕಾಲೀನವಾಗಿರುವುದು, ಅಲ್ಲಿ ಬರುವ ಪ್ರತಿಯೊಂದು ಪಾತ್ರ ಹಾಗು ಪ್ರತಿಯೊಂದು ಸನ್ನಿವೇಶವು ಓದುಗರಿಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ ಹಾಗು ಅದರೊಂದಿಗೆ ಸುಲಭವಾಗಿ relate ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲಿ ಚಿತ್ರಿಸಿರುವ ಎಲ್ಲ ಜಾಗತಿಕ ವಿಷಯಗಳು ನಾವು ಇತ್ತೀಚಿನ ವರ್ಷಗಳಲ್ಲಿ ಅನುಭವಿಸಿದ್ದ ಅಥವಾ ಕೇಳಿದ್ದ, ನಮ್ಮ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರಿದ್ದ ಘಟನೆಗಳು. ಕಾದಂಬರಿಯ ನಾಯಕ ನಾಯಕಿಯರು, ನಾವೇ, ಅಥವಾ ನಮಗೆ ಬಹಳ ಹತ್ತಿರದಲ್ಲಿರುವವರು ಎಂಬ ಭಾವನೆ ಹುಟ್ಟುತ್ತದೆ.
ಇಲ್ಲಿನ ದೂರದ ಊರೊಂದರಲ್ಲಿನ ಜೀವನ, ಬೆಂಗಳೂರಿನ IT ಕಂಪನಿಗಳು, ವಿದೇಶ ಯಾತ್ರೆಗಳು, ಅಮೆರಿಕಾದ ಜೀವನ, ಲೇ-ಆಫ್ ಗಳು, ವೀಸಾ ಸಮಸ್ಯೆ, ಮಾನಸಿಕ ಯಾತನೆಗಳು, ಕೌನ್ಸೆಲ್ಲಿಂಗ್, ಎಲ್ಲವೂ ಬಹಳ ಪ್ರಸ್ತುತವಾಗಿವೆ.
ಒಂದು ಹೊಸ, ಉತ್ತಮವಾದ ಪುಸ್ತಕವನ್ನು ಓದಿದ್ದು ಬಹಳ ಸಂತೋಷವಾಯಿತು.

ಉತ್ತಮ ಪುಸ್ತಕ ನೀಡಿರುವ ಲೇಖಕರಿಗೆ ಧನ್ಯವಾದಗಳು.