Wednesday, July 07, 2010

ಝವಾದಿ


ಈ ಕಾದಂಬರಿಯನ್ನು ನಾನು ೨ ವಾರಗಳಿಗೂ ಕಡಿಮೆ ಸಮಯದಲ್ಲಿ ಓದಿ ಮುಗಿಸಿದೆ. ನನ್ನ ಕನ್ನಡ ಓದುವ ಸಾಧಾರಣ ವೇಗಕ್ಕೆ ೫೫೦ ಪುಟಗಳನ್ನು ಇಷ್ಟು ಬೇಗ ಮುಗಿಸಿದ್ದು ನನಗೇ ಆಶ್ಚರ್ಯವಾಯಿತು.
ಲೇಖಕಿ ಶ್ರಿಮತಿ ಸುನಂದ ಬೆಳಗಾಂಕರ್ ಅವರು ಒಂದು ಸಾಮಾನ್ಯ ಸಾಂಸಾರಿಕ ಕಥೆಯನ್ನು ಸುಂದರವಾದ ಕಾದಂಬರಿಯಾಗಿ ಹೆಣೆದಿದ್ದಾರೆ.
ಮುಖ್ಯ ಪಾತ್ರಧಾರಿಯಾದ ಶಂಕರ ರಾಯರು, ಮೂರನೆ ವ್ಯಕ್ತಿಯ ಚಾಡಿ ಕೇಳಿ ತಮ್ಮ ಪತ್ನಿ, ಮಕ್ಕಳನ್ನು ತಿರಸ್ಕರಿಸಿರುತ್ತಾರೆ. ಎಷ್ಟೋ ವರ್ಷಗಳ ನಂತರ, ಆಫ್ರಿಕಾದ ಗೊರೊಂಗೊರೊ ಕ್ರೇಟರಿನ ಒಂದು ರಾಜ ಸಿಂಹ ಕುಟುಂಬದ ಪರಿಸ್ಥಿತಿಯು ಇವರ ಕುಟುಂಬದಂತೆಯೇ ಆಗಿದ್ದು, ನಂತರ ಸಿಂಹ ರಾಜ ತನ್ನ ತಪ್ಪನ್ನು ಅರಿತು, ಸಿಂಹಿಣಿಯನ್ನು ಸೇರುತ್ತದೆ. ಆ ಕುಟುಂಬಕ್ಕೂ, ತಮ್ಮ ಸಂಸಾರಕ್ಕೂ ಇರುವ ಹೋಲಿಕೆಯನ್ನು ಕಂಡು,ಅಲ್ಲಿನ ಗೈಡ್ ನ ಮಾತುಗಳಿಂದ, ತಾವು ಮಾಡಿದ ತಪ್ಪಿನ ಅರಿವಾಗಿ, ಪ್ರಾಯಶ್ಚಿತ್ತಾರ್ಥವಾಗಿ, ಮುಂಬೈಗೆ ಹಿಂದಿರುಗಿ, ಸಂಸಾರದೊಂದಿಗೆ ಒಂದಾಗುತ್ತಾರೆ. ಝಾವಾದಿ ಎಂದರೆ ಸ್ವಹೀಲಿ ಭಾಷೆಯಲ್ಲಿ "(ದೇವರ)ಕಾಣಿಕೆ" ಎಂದರ್ಥ. ವಿಷೇಶವಾದ ಕಥಾ ವಸ್ತು ಇಲ್ಲವಾದರು, ಕಥೆಯನ್ನು ಹೆಣೆದಿರುವ ರೀತಿ ಸೊಗಸಾಗಿದೆ.
- ಆಫ್ರಿಕಾದ ಗೊರೊಂಗೊರೊ ಕ್ರೇಟರಿನ ವರ್ಣನೆ ಸೊಗಸಾಗಿದೆ. ಓದುತ್ತಿರುವಂತೆ, ಅಲ್ಲಿನ ಪ್ರಾಣಿಗಳು ನಮ್ಮ ಕಣ್ಣೆದುರಿಗೇ ಸುಳಿದಾಡುತಿರುವಂತೆನಿಸುತ್ತದೆ.
- ಸಂಭಾಷಣೆಗಳು ಧಾರವಾಡ ಶೈಲಿಯ ಕನ್ನಡದಲ್ಲಿದ್ದು, ಚೇಷ್ಟೆಯ ಮಾತುಗಳು, ಅಂತಃಕರಣದ ಮಾತುಗಳು ಬಹಳ ಸಹಜವಾಗಿದೆ
- ಮುಖ್ಯ ಪಾತ್ರಗಳ ಮನಃಸ್ಥಿತಿಯ ವರ್ಣನೆ ನಮ್ಮೊಳಗೊಬ್ಬರ ಕಥೆಯನ್ನು ಓದುತ್ತಿರುವಂತೆನಿಸುತ್ತದೆ.
ಇದನ್ನು ಅಮ್ಮ ಸುಮಾರು ಹತ್ತು ವರ್ಷಗಳ ಹಿಂದೆ ಓದಿದ್ದು, ಲಿಬ್ರರಿಯಲ್ಲಿ ಇತ್ತೀಚೆಗೆ ಕಂಡು, ತಂದಿದ್ದರು. ನಮಗೆ ಸಿಕ್ಕ ಪ್ರತಿ ೧೯೯೪ ನಲ್ಲಿ ಮುದ್ರಣಗೊಂಡಿದ್ದು. ಮುದ್ರಣದಲ್ಲಿ ಹಲವು ತಪ್ಪುಗಳಿದ್ದುವು.
- ಸುಮಾರು ಸಂಭಾಷಣೆಗಳು ಇಂಗ್ಲಿಷಿನಲ್ಲಿದ್ದು, ಇಂಗ್ಲಿಷನ್ನು ಕನ್ನಡೀಕರಿಸಿ ಬರೆದದ್ದು ಓದಲು ಹಲವೆಡೆ ತಮಾಷೆಯಾಗಿತ್ತು.
- ಸಂಭಾಷಣೆಗಳನ್ನು ಕಡಿಮೆ ಮಾಡಿ, ಪುಸ್ತಕದ ಗಾತ್ರ ಸ್ವಲ್ಪ ಕಡಿಮೆ ಮಾಡಬಹುದಿತ್ತು. ಆದರು, ತುಂಬ ಬೋರ್ ಆಗುವಂತೇನು ಇಲ್ಲ.
ಒಮ್ಮೆ ಓದಲು, ಒಳ್ಳೆಯ ಲಘುವಾದ ಕಾದಂಬರಿ.