
ಆ ಗೂಡನ್ನು ಅಷ್ಟು ಹತ್ತಿರದಿಂದ ನೋಡುವುದು ರೋಮಾಂಚಕಾರಿಯಾಗಿದ್ದರೂ, ಆ ಪುಟ್ಟ ಹಕ್ಕಿಗಳ ಭೀಭತ್ಸ್ಯ ಕೂಗಿನಿಂದ ಅಲ್ಲಿಂದ ದೂರ ಸರಿದು, ನಿಃಶಬ್ಧವಾಗಿ ಕುಳಿತೆವು. ಎರಡು ನಿಮಿಷಗಳ ನಂತರ, ಕಂದು ಬಣ್ಣದ ಹೆಣ್ಣು ಹಕ್ಕಿ ಹಾರಿ ಬಂದು, ಸುತ್ತಲೂ ಪರಿಶೀಲಿಸಿ, ಅಪಾಯವೇನೂ ಇಲ್ಲವೆಂದು ಖಾತ್ರಿ ಪಡಿಸಿಕೊಂಡು, ಮೊಟ್ಟೆಗಳಿಗೆ ಕಾವು ನೀಡಲು ಆ ಪುಟ್ಟ ಗೂಡನ್ನು ಹೊಕ್ಕಿತು. ಕಪ್ಪು ಬಣ್ಣದ ಗಂಡು ಹಕ್ಕಿ ಅಲ್ಲೇ ತಂತಿಯ ಮೇಲೆ ಕಾವಲು ಕಾಯುತ್ತಿರುವಂತೆ ಕುಳಿತಿತ್ತು. ತನ್ನ ಗೂಡಿನ ಬಳಿಯಲ್ಲಿ ಏನಾದರೂ ಆಪತ್ತನ್ನು ಶಂಕಿಸಿದರೆ, ಚಿಟಾರನೆ ಚೀರಿ, ತನ್ನ ಸಂಗಾತಿಗೆ ಸೂಚನೆ ನೀಡುತ್ತಿತ್ತು.

ಹೀಗೆಯೇ ಒಂದು ವಾರ ನಡೆಯಿತು. ಆ ಹೆಣ್ಣು ಹಕ್ಕಿ ಗೂಡಿನಿಂದ ಹೊರಗೆ ಹಾರುವುದನ್ನೇ ಕಾಯ್ದುಕೊಂಡಿದ್ದು, ನಾವು ಇಣುಕಿ ನೋಡಿ ಸಂತಸ ಪಡುತ್ತಿದ್ದೆವು, ಕೆಲವೊಮ್ಮೆ ಫೋಟೋ ತೆಗೆದುಕೊಳ್ಳುತ್ತಿದ್ದೆವು.
ಸುಮಾರು ಒಂದು ವಾರದ ನಂತರ ಮೊಟ್ಟೆಗಳು ಒಡೆದು, ಕಪ್ಪು ಮಾಂಸದ ಮುದ್ದೆಗಳಂತಿದ್ದ ಸಣ್ಣ ಮರಿಗಳು ಹೊರಬಂದಿದ್ದುವು! ರೂಪದಲ್ಲಿ ಹಕ್ಕಿಗಳನ್ನು ಇಷ್ಟೂ ಹೋಲದಿದ್ದ ಅವುಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದುದು ಹಳದಿ ಬಣ್ಣದ ಕೊಕ್ಕುಗಳು ಮಾತ್ರ.
ಇದುವರೆಗೂ ಕಾವಲು ಕಾಯುತ್ತಿದ್ದ ಗಂಡು ಹಕ್ಕಿ ಈಗ ತನ್ನ ಕೊಕ್ಕಿನಲ್ಲಿ ಹುಳು ಹುಪ್ಪಟೆಗಳನ್ನು ಹಿಡಿದು ತಂದು ತನ್ನ ಪುಟ್ಟ ಕಂದಮ್ಮಗಳಿಗೆ ಉಣಿಸಲಾರಂಭಿಸಿತು. ಹೆಣ್ಣು ಪಕ್ಷಿ ಈಗ ಗೂಡನ್ನು ಕಾವಲು ಕಾಯುವ ಜವಾಬ್ದಾರಿಯನ್ನು ವಹಿಸಿಕೊಂಡಿತು.
